ಹೀನಾಯ

ಹೀನಾಯ
ಪದಮಂಜರಿ.ಕಾಂ  

ಹೀನಾಯ ಪದದ ಅರ್ಥ, ಉತ್ಪತ್ತಿ, ಉದಾಹರಣೆಯನ್ನು ವಿವರವಾಗಿ ಈ ಪುಟದಲ್ಲಿ ನೋಡೋಣ.

{tocify} $title={ ವಿಷಯ ಸೂಚಿ}

ಅರ್ಥ: ಅವಮಾನ, ಅವಮಾನ ಆಗುವಂತಹ, ಕೊರತೆ, ಕಳಪೆ ಮಟ್ಟದ

English: heenaaya (Kannada) = dishonour, disrespect, lack, deficiency

हिंदी: हीनाय (कन्नड) = अपमान

संस्कृत: हीनाय (कन्नड) = अवमान

ಅರ್ಥ

ನಾಮಪದ:
ಅವಮಾನ, ಕೊರತೆ

ಗುಣವಾಚಕ:
ಅವಮಾನ ಆಗುವಂತಹ, ಕಳಪೆ ಮಟ್ಟದ, ಕೊರತೆ ಇರುವ, ಕೀಳು ಅಭಿರುಚಿಯ, ಕೆಟ್ಟ ರೀತಿಯ

ಉತ್ಪತ್ತಿ

ಹೀನ ಎಂದರೆ ಕೆಟ್ಟ, ಕೀಳು ಮಟ್ಟದ, ಇಲ್ಲದಿರುವದು ಎಂಬರ್ಥ ಇದೆ. ಇದು ಸಂಸ್ಕೃತ ಮೂಲ ಶಬ್ದ.

ಉದಾಹರಣೆಗೆ ಅಂಗ ಹೀನ ಎಂದರೆ ಅಂಗ ಇಲ್ಲದವ, ಬುದ್ಧಿ ಹೀನ, ಮತಿ ಹೀನ ಎಂದರೆ ಬುದ್ಧಿ ಇಲ್ಲದವ ಅರ್ಥ. ಅದೇ ರೀತಿ ಹೀನ ಕೆಲಸ ಎಂದರೆ ಕೀಳು ಮಟ್ಟದ ಕೆಲಸ, ಹೀನ ನಡತೆ ಎಂದರೆ ಕೆಟ್ಟ ನಡತೆ.

ಆಯ ಎಂದರೆ ಹಲವು ಅರ್ಥಗಳಿದ್ದು ಅದರಲ್ಲಿ ಒಂದು ಬಂದಿದ್ದು, ಗಳಿಸಿದ್ದು ಎಂದರ್ಥ. ಉದಾಹರಣೆಗೆ ಉಳಿತಾಯ ಎಂದರೆ ಗಳಿಸಿದ್ದನ್ನು/ ಬಂದಿದ್ದನ್ನು ಉಳಿಸುವದು.

ಹೀನ + ಆಯ = ಹೀನಾಯ

ಹೀನಾಯ ಇದರ ಅಕ್ಷರಶಃ ಅರ್ಥ ಬಂದಿದ್ದು, ಗಳಿಸಿದ ಮಾನ ಇಲ್ಲದಾಗುವದು ಎಂಬರ್ಥ.

ಒಟ್ಟಿನಲ್ಲಿ ಹೀನಾಯ ಆಗುವದು ಎಂದರೆ ಅವಮಾನ ಆಗುವದು ಎಂದರ್ಥ. 

ಉಪಯೋಗ

ನಾಮಪದ:

ಅಮ್ಮ ಬೈದಿದ್ದು ಮಗಳಿಗೆ ತುಂಬಾ ಹೀನಾಯ ಆಯ್ತು. = ಅಮ್ಮ ಬೈದಿದ್ದು ಮಗಳಿಗೆ ತುಂಬಾ ಅವಮಾನ ಆಯ್ತು.

ಗುಣವಾಚಕ:

ಗಟ್ಟಿ ಪೈಲ್ವಾನ್ ತಂಡದ ಎದುರು ಕಡ್ಡಿ ಪೈಲ್ವಾನ್ ತಂಡಕ್ಕೆ ಹೀನಾಯ ಸೋಲು. (ಅವಮಾನ ಆಗುವಂತಹ)

ದುಷ್ಟಸೇನ ಅವರದ್ದು ಅತ್ಯಂತ ಹೀನಾಯ ರಾಜಕಾರಣ. (ಕೆಟ್ಟ ರೀತಿಯ)

ಶೂನ್ಯಕ್ಕೆ ಆಲ್ ಔಟ್ ಆದ ನಗರದ ಟೀಂ ಹೀನಾಯ ದಾಖಲೆಯೊಂದನ್ನು ಮಾಡಿದೆ.  (ಅವಮಾನ ಆಗುವಂತಹ / ಕೆಟ್ಟ ರೀತಿಯ)

ಕಾಡಲ್ಲಿ ದಾರಿ ತಪ್ಪಿದ ಟ್ರೆಕ್ಕಿಂಗ್ ತಂಡಕ್ಕೆ ಊರಿನ ದಾರಿ ಸಿಗದೇ ಅತ್ಯಂತ ಹೀನಾಯ ಸ್ಥಿತಿ ಆಗಿತ್ತು.

ನಮ್ಮ ಹೀನಾಯ ಸೋಲಿಗೆ ನಾವೇ ಕಾರಣ ಎಂದು ಅವರು ಹೇಳಿದರು.

ವಿವರ

ಹೀನಾಯ ಸೋಲು ಎಂದರೆ ಅವಮಾನ ಆಗುವಂತಹ ಸೋಲು. ನೆನಪಿಡಿ ಕಡಿಮೆ ಅಂತರದಲ್ಲಿ ಸೋತರೆ ಅದಕ್ಕೆ ಹೀನಾಯ ಸೋಲು ಎನ್ನಲಾಗದು. ಜಾಸ್ತಿ ಅಂತರದಲ್ಲಿ ಸೋತರೆ ಮಾತ್ರ ಹೀನಾಯ ಸೋಲು ಎನ್ನಬಹುದು.

ಹೀನಾಯ ಅನ್ನುವದೇ ಒಂದು ಜಾಸ್ತಿ ಅವಮಾನ ಆಗುವಂತಹ ಅನ್ನುವದನ್ನು ಸೂಚಿಸುತ್ತೆ ಆದರೂ ಅನೇಕ ಬಾರಿ ತುಂಬಾ ಅಥವಾ ಅತ್ಯಂತ ಇತ್ಯಾದಿ ಪದಗಳನ್ನು ಉತ್ಪ್ರೇಕ್ಷೆಗಾಗಿ ಅಥವಾ ಒತ್ತಿ ಹೇಳುವದಕ್ಕೆ ಬಳಸಲಾಗುತ್ತದೆ.

ಉದಾಹರಣೆ:

೧. ಇಂತಹ ಹೀನಾಯ ರಾಜಕಾರಣ ನಾನು ನೋಡೇ ಇರಲಿಲ್ಲ

೨. ಇಂತಹ ಅತ್ಯಂತ ಹೀನಾಯ ರಾಜಕಾರಣ ನಾನು ನೋಡೇ ಇರಲಿಲ್ಲ

ಮೇಲಿನ ಎರಡೂ ಉದಾ ನೋಡಿ. ಎರಡನೆಯ ಉದಾಹರಣೆಯಲ್ಲಿ ಅತ್ಯಂತ ಎನ್ನುವದು ಉತ್ಪ್ರೇಕ್ಷೆಗಾಗಿ ಬಳಕೆ ಆಗಿದೆ. 

ಹೀನಾಯ ಸೋಲು ಅನ್ನುವದೇ ಜಾಸ್ತಿ ಅಂತರದಲ್ಲಿ ಅಥವಾ ಕಳಪೆ ಮಟ್ಟದಲ್ಲಿ ಸೋತಿದ್ದಾರೆ ಸೂಚಿಸುತ್ತದೆ. ಇನ್ನು ಅತ್ಯಂತ ಹೀನಾಯ ಸೋಲು ಎಂದರೆ ಅದು ಇನ್ನೂ ಒತ್ತಿ ಸೋಲು ತೀರಾ ಕಳಪೆ ಮಟ್ಟದ್ದು ಎಂದು ಹೇಳುತ್ತದೆ.

ಕಾಲಮಾನ

ಹೀನ ಮತ್ತು ಆಯ ಅನ್ನುವ ಪದಗಳು ಅತ್ಯಂತ ಪುರಾತನ ವಾದದ್ದು. ಸಂಸ್ಕೃತದಲ್ಲೂ ತುಂಬಾ ಹಿಂದಿನಿಂದ ಈ ಪದದ ಬಳಕೆ ಇತ್ತು. 

ಆದ್ರೆ ಹೀನಾಯ ಪದ ನನಗೆ ನಾಗವರ್ಮ ಕೃತಮಪ್ಪನ ಅಭಿಧಾನ ವಸ್ತುಕೋಶಂ ಹಾಗೂ ಡಾ॥ ಪಿವಿ ನಾರಾಯಣರ ಹಳಗನ್ನಡ ಪದಸಂಪದ ಗಳಲ್ಲಿ ಕಂಡು ಬರಲಿಲ್ಲ.

ಆದರೆ ಕಿಟ್ಟೆಲ್ ಅವರ ನಿಘಂಟಲ್ಲಿ ಈ ಪದ ಇದೆ. ಅಂದರೆ ೧೮೯೪ಕ್ಕಿಂತ ಹಳೆಯ ಪದ ಇದು ಎಂದು ಖಚಿತವಾಗಿ ಹೇಳಬಹುದು.

ಮೂಲ ಭಾಷೆ

ಸಂಸ್ಕೃತ ಪದಗಳಿಂದ ಕನ್ನಡದಲ್ಲಿ ಆಗಿರುವ ಪದ

ಇದೇ ಅರ್ಥದ ಪದಗಳು

ಅವಮಾನ, ಕಳಪೆ ಮಟ್ಟದ

ಬೇರೆ ಭಾಷೆಗಳಲ್ಲಿ

ಇಂಗ್ಲಿಷ್: ಡಿಸ್ ಹಾನರ್
ಹಿಂದಿ: ಅಪಮಾನ್
ಸಂಸ್ಕೃತ: ಅವಮಾನ

heenaaya - (Kannada) Meaning in English

dishonour, disrespect, lack, deficiency

हीनाय (कन्नड) - हिंदी में अर्थ

अपमान

हीनाय (कन्नड) - संस्कृत अर्थ

अवमान

ಈ ಲೇಖನ ಹೇಗನಿಸಿತು?ಈ ಪದದ ಬಗ್ಗೆ ಹೆಚ್ಚಿನ ವಿವರ ನಿಮಗೆ ಗೊತ್ತಾ? ಅಥವಾ ಏನಾದ್ರೂ ತಪ್ಪಿದೆಯಾ? ಕಮೆಂಟ್ ಹಾಕ್ತೀರಾ? ಈ ತಾಣ ನಿಮ್ಮ ಗೆಳೆಯರಿಗೆ ಇದು ಇಷ್ಟ ಆಗುತ್ತೆ ಅನ್ನಿಸಿದರೆ ಅವರಿಗೂ ಶೇರ್ ಮಾಡಿ. ಸರಿನಾ? ವಂದನೆಗಳು.

ರಾಜೇಶ ಹೆಗಡೆ

ಲೇಖಕರು ಒಬ್ಬ ನುರಿತ ಕಂಪ್ಯೂಟರ್ ಇಂಜಿನಿಯರ್ ಆಗಿದ್ದು ವಿಸ್ಮಯನಗರಿ.ಕಾಂ, ಪದಮಂಜರಿ.ಕಾಂ, ಗಣಕಪುರಿ.ಕಾಂ ನಿರ್ಮಾತೃ ಕೂಡಾ. ಕನ್ನಡದಲ್ಲಿ ಕಂಪ್ಯೂಟರ್ ಬಗ್ಗೆ ತಿಳಿಸ ಬೇಕು ಅನ್ನುವದು ಅವರ ಮಹದಿಚ್ಚೆ. ಕನ್ನಡ ಬ್ಲಾಗ್ಗಿಂಗ್, ಕಂಪ್ಯೂಟರ್ ತಂತ್ರಜ್ಞಾನ, ಫೋಟೋಗ್ರಾಫಿ, ವಿಡಿಯೋ ಗ್ರಾಫಿ, ಪ್ರವಾಸ ಮುಖ್ಯ ಹವ್ಯಾಸ. ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆಯನ್ನು ತಕ್ಕ ಮಟ್ಟಿಗೆ ಬಲ್ಲರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು