ಕೋಣೆ / ಕ್ವಾಣೆ

ಕೋಣೆ
ಪದಮಂಜರಿ.ಕಾಂ  

ಕೋಣೆ / ಕ್ವಾಣೆ ಪದದ ಅರ್ಥ, ಉತ್ಪತ್ತಿ, ಉದಾಹರಣೆಯನ್ನು ವಿವರವಾಗಿ ಈ ಪುಟದಲ್ಲಿ ನೋಡೋಣ.

{tocify} $title={ವಿಷಯ ಸೂಚಿ}

ಅರ್ಥ: ರೂಂ, ಕೊಠಡಿ, ಮೂಲೆ, ಮನೆಯ ಒಳಗಿನ ಮೂಲೆ/ಜಾಗ

English: koNe (Kannada) = room, corner

हिंदी: कोणे, क्वाणे (कन्नड) = कमरा, कोने

संस्कृत: कोणे, क्वाणे (कन्नड) = कक्षः, कोन, कोण

ಅರ್ಥ


ನಾಮಪದ ೧:

ರೂಂ, ಕೊಠಡಿ, ಕಕ್ಷೆ, ನಾಲ್ಕು ಗೋಡೆಗಳಿಂದ ಸುತ್ತುವರಿದ ಭಾಗ, ಮನೆಯ ಒಳಗಿನ ಮೂಲೆ/ಜಾಗ

ನಾಮಪದ ೨:

ಮೂಲೆ, ಕಾರ್ನರ್

ಉತ್ಪತ್ತಿ

ಸಂಸ್ಕೃತದಲ್ಲಿ ಕೋಣ, ಕೋನ ಎಂದರೆ ಮೂಲೆ, ಕಾರ್ನರ್ ಎಂದರ್ಥ. ಅದೇ ಪದ ಕನ್ನಡದಲ್ಲಿ ಕೋಣೆ ಎಂದಾಗಿದೆ. ಇದನ್ನು ಮನೆಯೊಳಗಿನ ವಿವಿಧ ಭಾಗಗಳನ್ನು ಅಥವಾ ಮೂಲೆಗಳನ್ನು ಸೂಚಿಸಲು ಬಳಸುತ್ತಾರೆ.

ಉಪಯೋಗ

ನಾಮಪದ:

  • ಆ ಕತ್ತಲ ಕೋಣೆಯಲ್ಲಿ ಅದೆಷ್ಟು ರಹಸ್ಯ ಅಡಗಿದೆಯೋ!
  • ಅವರ ಮನೆಯಲ್ಲಿ ತುಂಬಾ ಕೋಣೆಗಳಿದ್ದವು.
  • ಮನೆಯ ಮಧ್ಯದ ಕೋಣೆಗೆ ಬೆಳಕು ತಲುಪುತ್ತಿರಲಿಲ್ಲ.
  • ಅಡುಗೆ ಕೋಣೆಗೆ ಬೆಕ್ಕು ಹೋಗಿ ಹಾಲು ಕುಡಿದದ್ದು ಯಾರಿಗೂ ತಿಳಿಯಲೇ ಇಲ್ಲ.
  • ಕ್ವಾಣೆಲಿ ಬೆಲ್ಲದ ಡಬ್ಬಿ ಇದ್ದು ತಕಂಬಾ.

ಕಾಲಮಾನ

೧೮೯೪ರಲ್ಲಿ ಪ್ರಕಟವಾದ ಕಿಟ್ಟೆಲ್ ನಿಘಂಟಲ್ಲಿ ಈ ಪದ ಇರುವದರಿಂದ ಅದಕ್ಕಿಂತ ಹಳೆಯ ಪದ ಎನ್ನಬಹುದು. ಹಳಗನ್ನಡದಲ್ಲೂ ಕೋಣೆ ಎಂಬುದು ಒಳ ಮನೆ ಎಂಬರ್ಥದಲ್ಲಿ ಬಳಕೆ ಆಗಿದೆ. ಮೂಲ ಸಂಸ್ಕೃತ ಪದ ಕೋಣ ತುಂಬಾ ಹಳೆಯ ಕಾಲದ್ದು.

ಮೂಲ ಭಾಷೆ

ಸಂಸ್ಕೃತ

ವಿವರ

ಬಹಳ ಹಿಂದೆ ಚಿಕ್ಕ ಮನೆ ಎಂದರೆ ಒಂದು ವಿಶಾಲವಾದ ನಾಲ್ಕು ಗೋಡೆಯಿಂದ ಸುತ್ತುವರಿದ ಜಾಗ ಅಷ್ಟೇ ಇರುತ್ತಿತ್ತು. ಅದರಲ್ಲಿ ಪ್ರತಿ ಮೂಲೆಯನ್ನು ಒಂದೊಂದು ಕಾರ್ಯಗಳಿಗೆ ಬಳಸಲಾಗುತ್ತಿತ್ತು.

ಮನೆಯ ಒಳಗೆ ಒಂದು ಮೂಲೆ ಅಡುಗೆಗೆ ಬಳಕೆ ಆದರೆ ಇನ್ನೊಂದು ಮೂಲೆ ಮಲಗಲು ಹೀಗೆ ಬೇರೆ ಬೇರೆ ಕಾರ್ಯಗಳಿಗೆ ಬಳಕೆ ಆಗುತ್ತಿತ್ತು. ಪ್ರತ್ಯೇಕ ರೂಂ ಇರುತ್ತಿರಲಿಲ್ಲ. 

ಸಂಸ್ಕೃತದಲ್ಲಿ ಕೋಣ ಎಂದರೆ ಮೂಲೆ ಎಂದರ್ಥ. ಅದೇ ಪದ ಕನ್ನಡದಲ್ಲಿ ಕೋಣೆ ಎಂದಾಗಿದೆ. ಕೋಣ ಪದ ಕನ್ನಡದಲ್ಲಿ ಪ್ರಾಣಿಯ ಹೆಸರಿಗೆ ಬಳಕೆ ಆಗುತ್ತದೆ. ಕೋಣೆ ಎಂದರೆ ಕಾರ್ನರ್ ಅಥವಾ ಮೂಲೆ ಎಂದರ್ಥ. ಕೋಣ/ಕೋನ ತತ್ಸಮ ಪದ ಆದರೆ ಕೋಣೆ ತದ್ಭವ ಪದ ಎನ್ನಬಹುದು.

ಮನೆಯ ಒಂದೊಂದು ಮೂಲೆ ಉಪಯೋಗಕ್ಕೆ ಅನುಸಾರವಾಗಿ ಅಡುಗೆ ಕೋಣೆ, ಮಲಗುವ ಕೋಣೆ ಎನ್ನುವ ರೂಡಿ ಇದ್ದು ಕ್ರಮೇಣ ಮನೆಯಲ್ಲಿ ಈ ಮೂಲೆಗಳನ್ನು ಗೋಡೆಗಳಿಂದ ಪ್ರತ್ಯೇಕಿಸಲು ಆರಂಭಿಸಿದರೂ ಆ ಭಾಗಗಳಿಗೆ ಕೋಣೆ ಎನ್ನುವ ಪರಿಪಾಠ ಮುಂದುವರಿಯಿತು.

ಇಂದು ಕೋಣೆ ಎಂದರೆ ನಾಲ್ಕು ಗೋಡೆಗಳಿಂದ ಸುತ್ತುವರಿದ ಭಾಗ, ಇದರ ಒಳ ಹೋಗಲು, ಹೊರ ಬರಲು ಬಾಗಿಲು ಇರುತ್ತೆ. ಕಿಟಕಿ ಇದ್ದರೂ ಇರಬಹುದು ಇಲ್ಲದೆಯೂ ಇರಬಹುದು.

ಉಪಯೋಗದ ಆಧಾರದ ಮೇಲೆ ಮನೆಯ ವಿವಿಧ ಮೂಲೆ/ಜಾಗ ಅಂದರೆ ಕೋಣೆಯನ್ನು ಬೇರೆ ಬೇರೆ ಹೆಸರಲ್ಲಿ ಕರೆಯಲಾಗುತ್ತದೆ.

ರಾತ್ರಿ ಮಲಗುವ ಕೋಣೆಗೆ ಮಲಗುವ ಕೋಣೆ (ಬೆಡ್ ರೂಂ), ಆಹಾರ ಸಿದ್ಧಪಡಿಸುವ ಜಾಗಕ್ಕೆ ಅಡುಗೆ ಕೋಣೆ, ನೀರಲ್ಲಿ ಮಿಂದು ದೇಹ ಶುದ್ದಗೊಳಿಸುವ ಕೋಣೆಗೆ ಸ್ನಾನದ ಕೋಣೆ, ಊಟ ತಿಂಡಿ ತಿನ್ನುವ ಕೋಣೆಗೆ ಊಟದ ಕೋಣೆ, ಅಧ್ಯಯನ ಅರ್ಥಾತ್ ಸ್ಟಡಿ ಮಾಡುವ ಕೋಣೆಗೆ ಓದುವ ಕೋಣೆ ಎಂದು ಹೆಸರಿಡುತ್ತಾ ಹೋಗಬಹುದು.

ಇನ್ನು ಬೆಳಕಿಲ್ಲದೆ ಸದಾ ಕತ್ತಲಿರುವ ಕೋಣೆಗೆ ಕತ್ತಲ ಕೋಣೆ, ದೇವರ ಪೂಜೆ ನಡೆಸುವ ಕೋಣೆಗೆ ದೇವರ ಕೋಣೆ ಎನ್ನಬಹುದು.

ಈ ಎಲ್ಲ ಪದಗಳು ಮಲಗೋ ಕ್ವಾಣೆ, ಅಡುಗೆ ಕ್ವಾಣೆ, ಸ್ನಾನದ ಕ್ವಾಣೆ, ಓದೋ ಕ್ವಾಣೆ, ದ್ಯಾವ್ರ ಕ್ವಾಣೆ, ಕತ್ಲ ಕ್ವಾಣೆ, ಊಟದ್ ಕ್ವಾಣೆ ಎಂದು ಆಡು ಭಾಷೆಗಳಲ್ಲಿ ಬಳಕೆ ಆಗುತ್ತದೆ.

ಊಟದ ಕೋಣೆ (ಊಟದ್ ಕ್ವಾಣೆ)

ಊಟ ತಿಂಡಿ ತಿನ್ನುವ ಡೈನಿಂಗ್ ರೂಂ ಎಂದರೆ ಊಟದ ಕೋಣೆ. 


ಅಡುಗೆ ಕೋಣೆ (ಅಡುಗೆ ಕ್ವಾಣೆ)
ಕಿಚನ್ ಗೆ ಇನ್ನೊಂದು ಹೆಸರೇ ಅಡುಗೆ ಕೋಣೆ.

ಓದುವ ಕೋಣೆ (ಓದೋ ಕ್ವಾಣೆ)
ಸ್ಟಡಿ ರೂಂ ಎಂದರೆ ಓದುವ ಕೋಣೆ.

ಸ್ನಾನದ ಕೋಣೆ (ಸ್ನಾನದ ಕ್ವಾಣೆ)
ಬಾತ್ ರೂಂ ಅರ್ಥಾತ್ ಸ್ನಾನದ ಕೋಣೆ.

ಇದೇ ಅರ್ಥದ ಪದಗಳು

ಕಕ್ಷೆ, ಕೊಠಡಿ, ರೂಂ, ಮೂಲೆ, ಕಾರ್ನರ್

ಇದು ಇರುವ ಬೇರೆ ಪದಗಳು

ಮಲಗುವ ಕೋಣೆ, ಅಡುಗೆ ಕೋಣೆ, ಸ್ನಾನದ ಕೋಣೆ, ಊಟದ ಕೋಣೆ,  ಓದುವ ಕೋಣೆ , ಕತ್ತಲ ಕೋಣೆ,  ದೇವರ ಕೋಣೆ

ಏಕ ವಚನ / ಬಹು ವಚನ

ಕೋಣೆ ಏಕವಚನ ಪದ ಆಗಿದ್ದು ಒಂದು ರೂಂ ಉದ್ದೇಶಿಸಿದ್ದರೆ ಕೋಣೆಗಳು ಬಹುವಚನ ಆಗಿದ್ದು ಒಂದಕ್ಕಿಂತ ಹೆಚ್ಚಿನ ಕೋಣೆ ಎಂದು ಅರ್ಥ ಕೊಡುತ್ತದೆ. ಹೀಗೆಯೇ ಕ್ವಾಣೆಗಳು ಕ್ವಾಣೆ ಪದದ ಬಹುವಚನ ಆಗಿದೆ.

ಕೋಣೆ (ಏಕವಚನ) = ಕೋಣೆಗಳು (ಬಹುವಚನ)
ಕ್ವಾಣೆ (ಏಕವಚನ) = ಕ್ವಾಣೆಗಳು (ಬಹುವಚನ)

ವಿಭಕ್ತಿ ಪ್ರತ್ಯಯಗಳು

ವಿಭಕ್ತಿಕಾರಕಾರ್ಥಪ್ರತ್ಯಯವಿಭಕ್ತಿ ಪ್ರತ್ಯಯ ರೂಪಉದಾಹರಣೆ
ಪ್ರಥಮಾಕರ್ತೃರ್ಥಕೋಣೆಯುಕೋಣೆಯು ಚೊಕ್ಕ ಆಗಿತ್ತು.
ದ್ವಿತೀಯಾಕರ್ಮಾರ್ಥಅನ್ನುಕೋಣೆಯನ್ನುಕೋಣೆಯನ್ನು ಖಾಲಿ ಮಾಡಿಸಲಾಯ್ತು.
ತೃತೀಯಾಕರಣಾರ್ಥಇಂದಕೋಣೆಯಿಂದಕೋಣೆಯಿಂದ ಬೆಕ್ಕು ಹೊರ ಬಂತು.
ಚತುರ್ಥಿಸಂಪ್ರಧಾನಗೆ, ಇಗೆ, ಕ್ಕೆಕೋಣೆಗೆಕೋಣೆಗೆ ಯಾರೂ ಹೋಗಿರಲಿಲ್ಲ.
ಪಂಚಮಿಅಪಾದಾನದೆಸೆಯಿಂದಕೋಣೆಯ ದೆಸೆಯಿಂದಕೋಣೆಯ ದೆಸೆಯಿಂದ ನಾವು ಅಪಾಯದಿಂದ ಪಾರಾದೆವು.
ಷಷ್ಟಿಸಂಬಂಧಕೋಣೆಯಕೋಣೆಯ ಬಾಗಿಲು ತೆರೆದಿತ್ತು.
ಸಪ್ತಮಿಅಧಿಕರಣಅಲ್ಲಿ, ಅಲಿ, ಒಳುಕೋಣೆಯಲ್ಲಿ, ಕೋಣೆಯಲಿ, ಕೋಣೆಯೊಳುಕೋಣೆಯಲ್ಲಿ ಯಾರೋ ಕುಳಿತಂತಿತ್ತು. ಕೋಣೆಯಲಿ ಒಬ್ಬಂಟಿ ಆಗಿ ಕುಳಿತು ಬೋರಾಗಿತ್ತು. ಕೋಣೆಯೊಳು ಕತ್ತಲು ಕವಿದಿತ್ತು.
ಸಂಬೋಧನೆಅಭಿಮುಖೀಕರಣಆ, ಎ, ಈ, ಇರಾಕೋಣೆಯೇಕೋಣೆಯೇ ನನ್ನ ಮಾತು ಕೇಳುವೆಯಾ?

ಬೇರೆ ಭಾಷೆಗಳಲ್ಲಿ

ಇಂಗ್ಲಿಷ್: ರೂಂ, ಕಾರ್ನರ್
ಹಿಂದಿ: ಕಮರಾ, ಕೋನೆ
ಸಂಸ್ಕೃತ: ಕಕ್ಷಃ, ಕೋಣ, ಕೋನ

koNe (Kannada) Meaning in English

koNe(kannada) =  Room, Corner

कोणे, क्वाणे (कन्नड) हिंदी में अर्थ

कोणे, क्वाणे (कन्नड)  = कमरा, कोने

कोणे, क्वाणे (कन्नड) संस्कृत अर्थ

कोणे, क्वाणे (कन्नड)  = कक्षः, कोन, कोण

ಈ ಲೇಖನ ಹೇಗನಿಸಿತು? ಈ ಪದದ ಬಗ್ಗೆ ಹೆಚ್ಚಿನ ವಿವರ ನಿಮಗೆ ಗೊತ್ತಾ? ಅಥವಾ ಏನಾದ್ರೂ ತಪ್ಪಿದೆಯಾ? ಕಮೆಂಟ್ ಹಾಕ್ತೀರಾ? ಈ ತಾಣ ನಿಮ್ಮ ಗೆಳೆಯರಿಗೆ ಇದು ಇಷ್ಟ ಆಗುತ್ತೆ ಅನ್ನಿಸಿದರೆ ಅವರಿಗೂ ಶೇರ್ ಮಾಡಿ. ಸರಿನಾ? ವಂದನೆಗಳು.


Image by Peter Weideman from Pixabay Image by StockSnap from Pixabay Image by Michal Jarmoluk from Pixabay Image by ErikaWittlieb from Pixabay Image by ErikaWittlieb from Pixabay
ರಾಜೇಶ ಹೆಗಡೆ

ಲೇಖಕರು ಒಬ್ಬ ನುರಿತ ಕಂಪ್ಯೂಟರ್ ಇಂಜಿನಿಯರ್ ಆಗಿದ್ದು ವಿಸ್ಮಯನಗರಿ.ಕಾಂ, ಪದಮಂಜರಿ.ಕಾಂ, ಗಣಕಪುರಿ.ಕಾಂ ನಿರ್ಮಾತೃ ಕೂಡಾ. ಕನ್ನಡದಲ್ಲಿ ಕಂಪ್ಯೂಟರ್ ಬಗ್ಗೆ ತಿಳಿಸ ಬೇಕು ಅನ್ನುವದು ಅವರ ಮಹದಿಚ್ಚೆ. ಕನ್ನಡ ಬ್ಲಾಗ್ಗಿಂಗ್, ಕಂಪ್ಯೂಟರ್ ತಂತ್ರಜ್ಞಾನ, ಫೋಟೋಗ್ರಾಫಿ, ವಿಡಿಯೋ ಗ್ರಾಫಿ, ಪ್ರವಾಸ ಮುಖ್ಯ ಹವ್ಯಾಸ. ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆಯನ್ನು ತಕ್ಕ ಮಟ್ಟಿಗೆ ಬಲ್ಲರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು