ಕಾಂತಾರ / ಕಾನ್ತಾರ

ಕಾಂತಾರ
ಪದಮಂಜರಿ.ಕಾಂ  

ಕಾಂತಾರ / ಕಾನ್ತಾರ ಪದದ ಅರ್ಥ, ಉತ್ಪತ್ತಿ, ಉದಾಹರಣೆಯನ್ನು ವಿವರವಾಗಿ ಈ ಪುಟದಲ್ಲಿ ನೋಡೋಣ.

{tocify} $title={ ವಿಷಯ ಸೂಚಿ}

ಅರ್ಥ: ಕಾಡು, ಅರಣ್ಯ, ಅಡವಿ, ವನ, ಕಾನನ, ಜಂಗಲ್,  ಎಲ್ಲಿ ಕೊನೆಗೊಳ್ಳುವದೋ ಗೊತ್ತಿಲ್ಲದಂತಹ ದಟ್ಟವಾದ ಕಾಡು, ನಿಗೂಢ, ರಹಸ್ಯಮಯ (ಗೊಂಡಾರಣ್ಯ), ಯಾವ ಅಂತ(ಕೊನೆ / ಮಿತಿ) ಇಲ್ಲದಷ್ಟು ಕಷ್ಟ ಇರುವ ದೊಡ್ಡದಾದ (ಅರಣ್ಯ), ಅಪರಿಮಿತ ಕಷ್ಟ ಇರುವ (ಕಾಡು)

English: kantara (Kannada) = Forest, inscrutable (Forest), Mysterious (Forest)

हिंदी: कान्तार (कन्नड) = वन, अरण्य, जंगल, रहस्यमय(जंगल)

संस्कृत: कान्तार (कन्नड) = वन, अरण्य, कान्तार, गोपनीय(अरण्य), रहस्यमय(वन)

ಅರ್ಥ


ನಾಮಪದ: 

ಗೊಂಡಾರಣ್ಯ, ಕಾಡು, ಅರಣ್ಯ, ಅಡವಿ, ವನ, ಕಾನನ, ಜಂಗಲ್

ಗುಣವಾಚಕ:

ಯಾವುದೇ ಅಂತ/ಮಿತಿ/ಕೊನೆ ಇಲ್ಲದಷ್ಟು ಕಷ್ಟ ಇರುವ, ನಿಗೂಢ, ರಹಸ್ಯಮಯ, ತಿಳಿಯಲಾಗದ, ಅಪರಿಮಿತ ಕಷ್ಟ ಇರುವ (ಅರಣ್ಯ)

ಉತ್ಪತ್ತಿ

ಕಾಂತಾರಂ ಅಥವಾ ಕಾಂತಾರ ಅಥವಾ ಕಾನ್ತಾರ ಎಂಬುದು ಸಂಸ್ಕೃತ ಪದ ಆಗಿದ್ದು ಇದರ ಬಳಕೆ ವಾಲ್ಮೀಕಿ ರಾಮಾಯಣ ಕಾಲದಿಂದಲೇ ಕಂಡು ಬರುತ್ತದೆ.

ಮೊದ ಮೊದಲು ಗುಣವಾಚಕ ಆಗಿದ್ದ ಈ ಪದ ಕ್ರಮೇಣ ಗೊಂಡಾರಣ್ಯಕ್ಕೆ ಪರ್ಯಾಯ ಪದವಾಗಿ ಬಳಕೆ ಆಗುತ್ತಾ ಹೋಯ್ತು.

कान्तार = क + अन्त + अर

= ಯಾವುದು

ಅಂತ =  ಕೊನೆ / ಮಿತಿ / ಲಿಮಿಟ್ ಎಂದರ್ಥ.

ಅರ  =  ಕಷ್ಟ, ತೊಂದರೆ. ಉದಾಹರಣೆಗೆ ಅರ ಧಾತು ನಮ್ಮ ಜ್ವರ ಪದದಲ್ಲೂ ಇದೆ. ಜ್ವ್ + ಅರ = ಜ್ವರ

ಕ + ಅಂತ + ಅರ = ಯಾವುದು + ಕೊನೆ + ಕಷ್ಟ = ಯಾವುದೇ ಅಂತ/ಮಿತಿ/ಕೊನೆ ಇಲ್ಲದಷ್ಟು ಕಷ್ಟ ಇರುವ. ಅರ್ಥಾತ್ ಅಪರಿಮಿತ ಕಷ್ಟ ಇರುವ ಎಂಬ ಅಕ್ಷರಶಃ ಅರ್ಥ ಇದೆ.

ಕ + ಅಂತ + ಅರ = ಕಾಂತ + ಅರ = ಕಾಂತಾರ

ಕಾಂತಾರ / ಕಾಂತಾರಂ ಪದವನ್ನು ದಟ್ಟವಾದ ಕಾಡಿಗೆ, ಗೊಂಡಾರಣ್ಯ, ಮಹಾ ಕಾಡಿಗೆ ಬಳಸಲಾಗುತ್ತದೆ. ಅದನ್ನು ಅನೇಕ ಬಾರಿ ವನದಲ್ಲಿ ಕಷ್ಟಕ್ಕೆ ಅಂತ / ಕೊನೆ ಎಲ್ಲಿದೆ ತಿಳಿಯದು ಅಷ್ಟು ದೊಡ್ಡದು ಎಂಬುದನ್ನು ತಿಳಿಸಲು ಸೂಚ್ಯವಾಗಿ ವಿಶೇಷಣದಂತೆ ಕೂಡಾ ಬಳಸಲಾಗುತ್ತದೆ.

ಒಂದು ರೀತಿಯಲ್ಲಿ ತೀರಾ ವಿಶಾಲವಾದ ದಟ್ಟವಾದ ಎಲ್ಲಿ ಅಂತ/ಕೊನೆ ಆಗುತ್ತೆ ಎಂದು ತಿಳಿಯದ ಹಲವು ಕಷ್ಟ ಎದುರಿಸಬೇಕಾದ ಅರಣ್ಯಕ್ಕೆ ಕಾಂತಾರ ಎಂಬ ವಿಶೇಷಣ ಬಳಸಲಾಗುತ್ತದೆ. 

ಉದಾ: ಕಾಂತಾರ ವನ

ಕಾಂತಾರ ಮರಗಳು ಎಂದರೆ ಯಾವುದು ಅಂತ/ಕೊನೆ/ಮಿತಿ ಎಂದು ತಿಳಿಯದಷ್ಟು ಇರುವ ಮರಗಳು ಎಂದರ್ಥ.

ಹೀಗೆ ದಟ್ಟವಾದ ಕಾಡಿಗೆ ವಿಶೇಷಣವಾಗಿ ಬಳಸುತ್ತಿದ್ದ ಕಾಂತಾರ ಪದ ಕ್ರಮೇಣ ಕಾಡು, ಅಡವಿ, ಗೊಂಡಾರಣ್ಯ, ಕಾನನಕ್ಕೆ ಪರ್ಯಾಯ ಪದವಾಗಿ ಬಳಕೆ ಆಗಿದೆ.

ಉಪಯೋಗ

ನಾಮಪದ:  (ಕೊನೆ ಎಲ್ಲಿದೆಯೋ ತಿಳಿಯದ ಕಾಡು )

  • ಟ್ರೆಕ್ಕಿಂಗ್ ಮಾಡುತ್ತಾ ಮೈಮರೆತು ಕಾಲೇಜು ಯುವಕ-ಯುವತಿಯರ ತಂಡ ಘೋರ ಕಾಂತಾರ ವನದಲ್ಲಿ ದಾರಿ ತಪ್ಪಿತು.

ಗುಣವಾಚಕ:  (ಎಲ್ಲಿ ಕೊನೆಗೊಳ್ಳುವದೋ ಹತ್ತಿರದಲ್ಲಿಲ್ಲದ, ನಿಗೂಢ, ರಹಸ್ಯಮಯ, ತಿಳಿಯಲಾಗದ)

  • ಕಾಂತಾರ ಕಾಡ ಬಗ್ಗೆ ಹಳ್ಳಿಯ ಜನಕ್ಕೆ ಈಗಲೂ ಒಂತರಾ ಭಯ.

ವಿವರ

ವಾಲ್ಮೀಕಿ ರಾಮಾಯಣಅಯೋಧ್ಯ ಕಾಂಡದ ೨೮ನೇ ಸರ್ಗದ ೫ನೇ ಶ್ಲೋಕ ಹೀಗಿದೆ.

ಈ ಸರ್ಗದಲ್ಲಿ ಶ್ರೀರಾಮ ವನವಾಸಕ್ಕೆ ಬರುತ್ತೇನೆ ಎಂದು ಹಠ ಮಾಡುತ್ತಿರುವ ಸೀತೆಗೆ ನನ್ನ ಜೊತೆ ಕಾಡಿಗೆ ಬರಬೇಡ ಎಂದು ಹೀಗೆ ಹೇಳುತ್ತಾನೆ.


सीते विमुच्यताम् एषा वन वास कृता मतिः |
बहु दोषम् हि कान्तारम् वनम् इति अभिधीयते ||

ಸೀತೆ ವಿಮುಚ್ಯತಾಂ ಏಷಾ ವನ ವಾಸ ಕೃತಾ ಮತಿಃ
ಬಹು ದೋಷಂ ಹಿ ಕಾಂತಾರಂ ವನಂ ಇತಿ ಅಭಿಧೀಯತೆ

ಶ್ಲೋಕಾರ್ಥ:

ಹೇ ಸೀತೆಯೇ (ಸೀತೆ) ಈ (ಏಷಾ) ಕಾಡಿನ ವಾಸ (ವನ ವಾಸ)  ಮಾಡುತ್ತೇನೆಂಬ (ಕೃತಾ) ಬುದ್ದಿಯನ್ನು(ಮತಿಃ) ಬಿಟ್ಟು ಬಿಡು(ವಿಮುಚ್ಯತಾಂ) ।
ತುಂಬಾ ತೊಂದರೆ ಉಂಟು ಮಾಡುವ (ಬಹು ದೋಷಂ ಹಿ) ಯಾವುದೇ ಅಂತ ಇಲ್ಲದಷ್ಟು ಕಷ್ಟ ಇರುವ / ಅಪರಿಮಿತ ಕಷ್ಟ ಇರುವ (ಕಾಂತಾರಂ) ಕಾಡು (ವನಂ) ಎಂದು ಹೇಳುತ್ತಾರೆ (ಇತಿ ಅಭಿಧೀಯತೆ) ॥

ವಾಲ್ಮೀಕಿ ರಾಮಾಯಣಅರಣ್ಯ ಕಾಂಡದ ೧೧ನೇ ಸರ್ಗದ ೭೬ನೇ ಶ್ಲೋಕ ಹೀಗಿದೆ.

ಈ ಶ್ಲೋಕದ ಸಂದರ್ಭ ರಾಮ, ಲಕ್ಷ್ಮಣರು ವನವಾಸದ ಸಂದರ್ಭದಲ್ಲಿ ಅಗಸ್ತ್ಯ ಮುನಿಯ ಆಶ್ರಮಕ್ಕೆ ಅರಣ್ಯದಲ್ಲಿ ಹೋಗುವ ಸಂದರ್ಭ.

पुष्पितान् पुष्पित अग्राभिर् लताभिर् अनुवेष्टितान् |

ददर्श रामः शतशः तत्र कान्तार पादपान् ||

ಪುಷ್ಪಿತಾನ್ ಪುಷ್ಪಿತ ಅಗ್ರಭಿರ್ ಲತಾಭಿರ್ ಅನುವೇಷ್ಟಿತಾನ್ ।

ದದರ್ಶ ರಾಮಃ ಶತಶಃ ತತ್ರ ಕಾಂತಾರ ಪಾದಪಾನ್ ॥

ಶ್ಲೋಕಾರ್ಥ:

ತುದಿಯಲ್ಲಿ(ಅಗ್ರಭಿರ್) ಹೂಗಳಿಂದ ಅಲಂಕರಿಸಲ್ಪಟ್ಟ(ಪುಷ್ಪಿತಾನ್ ಪುಷ್ಪಿತ)  ಬಳ್ಳಿಯಿಂದ ಆವರಿಸಲ್ಪಟ್ಟ(ಲತಾಭಿರ್ ಅನುವೇಷ್ಟಿತಾನ್) ನೂರಾರು (ಶತಶಃ) ಯಾವುದು ಅಂತ/ಕೊನೆ ಎಂದು ತಿಳಿಯದಷ್ಟು / ಕಾಡು (ಕಾಂತಾರ) ಮರಗಳನ್ನು (ಪಾದಪಾನ್) ರಾಮನು (ರಾಮಃ) ಅಲ್ಲಿ(ತತ್ರ)  ನೋಡಿದನು(ದದರ್ಶ).

ಆದರೆ ಇಲ್ಲಿ ಕಾಂತಾರ ಪಾದಪಾನ್ ಎಂದರೆ ಕಾಡು ಮರಗಳು ಎಂಬರ್ಥದಲ್ಲಿ ಬಳಸಲಾಗಿರಬಹುದು ಎಂಬುದು ನನ್ನ ಅನಿಸಿಕೆ.

ಇನ್ನು ಕಿಷ್ಕಿಂದಾ ಕಾಂಡಕ್ಕೆ ಹೋದರೆ ಅಲ್ಲಿ ೫೦ನೇ ಸರ್ಗ ೧೩ನೇ ಶ್ಲೋಕ (ವಾಲ್ಮೀಕಿರಾಮಾಯಣ.ನೆಟ್) ಅಲ್ಲಿ ಈ ಮುಂದಿನ ಶ್ಲೋಕ  ಬರುತ್ತದೆ.

ततः पर्वत कूट अभो हनुमान् मारुत आत्मजः |

अब्रवीत् वानरान् घोरान् कान्तार वन कोविदः ||

ತತ: ಪರ್ವತ ಕೂಟ ಅಭೋ ಹನುಮಾನ್ ಮಾರುತ ಆತ್ಮಜಃ ।

ಅಬ್ರವೀತ್ ವಾನರಾನ್ ಘೋರಾನ್ ಕಾಂತಾರ ವನ ಕೋವಿದಃ ॥

ಶ್ಲೋಕಾರ್ಥ:

ಬೆಟ್ಟಗಳ ತುದಿ ( ಪರ್ವತ ಕೂಟ ಅಭೋ) ಅಲ್ಲಿಂದ (ತತಃ)  ದಟ್ಟವಾದ(ಘೋರಾನ್)  ಯಾವುದೇ ಅಂತ/ಮಿತಿ ಇಲ್ಲದಷ್ಟು ಕಷ್ಟ ಇರುವ / ಅಪರಿಮಿತ ಕಷ್ಟ ಇರುವ  (ಕಾಂತಾರ) ಕಾಡಿನ (ವನ) ಬಗ್ಗೆ ತಿಳಿದ  (ಕೋವಿದಃ)  ವಾಯುವಿನ ಮಗನಾದ (ಮಾರುತ ಆತ್ಮಜಃ) ಹನುಮಂತನು (ಹನುಮಾನ್)  ವಾನರರನ್ನು(ವಾನರಾನ್) ಉದ್ದೇಶಿಸಿ ಹೇಳಿದನು (ಅಬ್ರವೀತ್).

ವಾಲ್ಮೀಕಿ ರಾಮಾಯಣದಲ್ಲಿ ಕಾಂತಾರ ಪದ ವಿಶೇಷಣದಂತೆ ಬಳಕೆ ಆಗಿದೆ. 

ಆದರೆ ಕ್ರಮೇಣ ಈ ಪದ ಅಡವಿ, ಕಾಡು ಎಂಬಂತೆ ಬಳಕೆ ಆಗುತ್ತಾ ಹೋಗಿದೆ. ಈಗ ಕಾಂತಾರ ಎಂದರೆ ಕಾಡು, ಆದರೆ ಸಾಮಾನ್ಯ ಕಾಡಲ್ಲ ವಿಶಾಲವಾದ ಕಾಡು. ಎಲ್ಲಿ ಮುಗಿಯುತ್ತೆ, ಅದರ ಲಿಮಿಟ್ ಎಲ್ಲಿದೆ ತಿಳಿಯದಷ್ಟು ದೊಡ್ಡದಾದ ಓಡಾಡಲು ಕಷ್ಟ ಆಗುವ ಗೊಂಡಾರಣ್ಯ.

ಮಹಾಕಾಂತಾರ ಎಂದರೆ ಭಾರಿ ದೊಡ್ಡ ಅರಣ್ಯ ಎಂದರ್ಥ.

ವರಾಹ ಮಿಹಿರ ತನ್ನ ಬೃಹತ್ ಸಂಹಿತಾ ಎಂಬ ಗೃಂಥದಲ್ಲಿ ವನ್ಯ ಜನ್ಯ ಎಂದು ಹೇಳುವದಕ್ಕೆ ಕಾನ್ತಾರಭವ (ಕಾಡಿನಿಂದ ಆಗಿದ್ದು) ಎಂದು ಪದ ಪ್ರಯೋಗ ಮಾಡಿದ್ದಾನೆ.

ಕಾಲಮಾನ

ಇದು ತುಂಬಾ ಹಳೆಯ ಸಂಸ್ಕೃತ ಪದ ಆಗಿದೆ. ವಾಲ್ಮೀಕಿ ರಾಮಾಯಣ ಕಾಲಕ್ಕಿಂತಲೂ ಮುಂಚೆ ಇದು ಬಳಕೆಯಲ್ಲಿತ್ತು ಅನ್ನಬಹುದು.

ಮೂಲ ಭಾಷೆ

ಸಂಸ್ಕೃತ

ಇದೇ ಅರ್ಥದ ಪದಗಳು

ಕಾನನ, ಕಾಡು, ಅರಣ್ಯ, ಜಂಗಲ್, ರಹಸ್ಯಮಯ ಕಾಡು, ನಿಗೂಢ ಕಾಡು, ವಿಶಾಲವಾದ ಅರಣ್ಯ

ಸಂಬಂಧ ಪಟ್ಟ ಪದಗಳು

ಕಾನನ, ಕಾಡು, ಅರಣ್ಯ, ಜಂಗಲ್, ರಹಸ್ಯಮಯ ಅರಣ್ಯ, ನಿಗೂಢ ಅರಣ್ಯ

ಬೇರೆ ಭಾಷೆಗಳಲ್ಲಿ

ಇಂಗ್ಲಿಷ್: ಫಾರೆಸ್ಟ್, ಇನ್ ಸ್ಕ್ರುಟೆಬಲ್ (ಫಾರೆಸ್ಟ್), ಮಿಸ್ಟಿರಿಯಸ್ (ಫಾರೆಸ್ಟ್), ಬಿಗ್ ಫಾರೆಸ್ಟ್

ಹಿಂದಿ: ವನ, ಅರಣ್ಯ, ಜಂಗಲ್, ರಹಸ್ಯಮಯ (ಜಂಗಲ್)

ಸಂಸ್ಕೃತ: ವನ, ಅರಣ್ಯ, ಗೋಪನೀಯ(ಅರಣ್ಯ), ರಹಸ್ಯಮಯ(ವನ)

kantara (Kannada) Meaning in English

Forest, inscrutable (Forest), Mysterious (Forest)

कान्तार (कन्नड) - हिंदी में अर्थ

वन, अरण्य, जंगल, रहस्यमय(वन)

कान्तार (कन्नड) - संस्कृत अर्थ

वन, अरण्य, कान्तार, गोपनीय(अरण्य), रहस्यमय(वन)

ಈ ಲೇಖನ ಹೇಗನಿಸಿತು?ಈ ಪದದ ಬಗ್ಗೆ ಹೆಚ್ಚಿನ ವಿವರ ನಿಮಗೆ ಗೊತ್ತಾ? ಅಥವಾ ಏನಾದ್ರೂ ತಪ್ಪಿದೆಯಾ? ಕಮೆಂಟ್ ಹಾಕ್ತೀರಾ? ಈ ತಾಣ ನಿಮ್ಮ ಗೆಳೆಯರಿಗೆ ಇದು ಇಷ್ಟ ಆಗುತ್ತೆ ಅನ್ನಿಸಿದರೆ ಅವರಿಗೂ ಶೇರ್ ಮಾಡಿ. ಸರಿನಾ? ವಂದನೆಗಳು.

ರಾಜೇಶ ಹೆಗಡೆ

ಲೇಖಕರು ಒಬ್ಬ ನುರಿತ ಕಂಪ್ಯೂಟರ್ ಇಂಜಿನಿಯರ್ ಆಗಿದ್ದು ವಿಸ್ಮಯನಗರಿ.ಕಾಂ, ಪದಮಂಜರಿ.ಕಾಂ, ಗಣಕಪುರಿ.ಕಾಂ ನಿರ್ಮಾತೃ ಕೂಡಾ. ಕನ್ನಡದಲ್ಲಿ ಕಂಪ್ಯೂಟರ್ ಬಗ್ಗೆ ತಿಳಿಸ ಬೇಕು ಅನ್ನುವದು ಅವರ ಮಹದಿಚ್ಚೆ. ಕನ್ನಡ ಬ್ಲಾಗ್ಗಿಂಗ್, ಕಂಪ್ಯೂಟರ್ ತಂತ್ರಜ್ಞಾನ, ಫೋಟೋಗ್ರಾಫಿ, ವಿಡಿಯೋ ಗ್ರಾಫಿ, ಪ್ರವಾಸ ಮುಖ್ಯ ಹವ್ಯಾಸ. ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆಯನ್ನು ತಕ್ಕ ಮಟ್ಟಿಗೆ ಬಲ್ಲರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು