ವಿಷಣ್ಣ

ವಿಷಣ್ಣ
ಪದಮಂಜರಿ.ಕಾಂ  

ವಿಷಣ್ಣ ಪದದ ಅರ್ಥ, ಉತ್ಪತ್ತಿ, ಉದಾಹರಣೆಯನ್ನು ವಿವರವಾಗಿ ಈ ಪುಟದಲ್ಲಿ ನೋಡೋಣ.

{tocify} $title={ ವಿಷಯ ಸೂಚಿ}

ಅರ್ಥ: ನಿರುತ್ಸಾಹಿ, ದುಃಖಿ, ಖಿನ್ನ, ಬೇಸರ, ಕುಗ್ಗಿದವ

English: VishaNNa (Kannada) = Dejected, Sad, Downcast, Spiritless, Hangdog

हिंदी: विषण्ण (कन्नड)विषण्ण, खिन्न, दुखी, उदास

संस्कृत: विषण्ण (कन्नड) = विषण्ण

ಅರ್ಥ

ನಾಮಪದ:

  • ನಿರುತ್ಸಾಹಿ, ದುಃಖಿ, ಕುಗ್ಗಿದವ, ತಲೆತಗ್ಗಿಸಿದವ, ನಿರಾಶೆ
  • ಕಣ್ಣಲ್ಲೇ ವ್ಯಕ್ತ ಮಾಡುವ ನಿರುತ್ಸಾಹ, ನಿರಾಶೆ, ದುಃಖದ ಭಾವನೆ

ಗುಣವಾಚಕ:
ಉತ್ಸಾಹ ರಹಿತ, ಖಿನ್ನ, ಕಳಾಹೀನ, ಬೇಸರ, ನಿರಾಶಾಭಾವ

ಉತ್ಪತ್ತಿ

ಇದು ಸಂಸ್ಕೃತ ಮೂಲದ ಪದ ಆಗಿದ್ದು ತತ್ಸಮ ಪದ ಆಗಿದೆ.

ಉಪಯೋಗ

ನಾಮಪದ:
ಅವನು ಒಬ್ಬ ವಿಷಣ್ಣ ಮನುಷ್ಯ.

ಗುಣವಾಚಕ:

ಅವರ ಮುಖದಲ್ಲಿ ವಿಷಣ್ಣ ಭಾವ ಕಾಣಿಸುತ್ತಿತ್ತು.

ವಿವರ


ಚಿತ್ರಕೃಪೆ: Pexels ಇಂದ Pixabay

ರಾಮಾಯಣ ಹಾಗೂ ಮಹಾಭಾರತದಲ್ಲೂ ವಿಷಣ್ಣವದನ ಪದ ಬಳಕೆ ಆಗಿದೆ.

ವದನ ಎಂದರೆ ಸಂಸ್ಕೃತದಲ್ಲಿ ಮುಖ ಎಂದರ್ಥ. ವಿಷಣ್ಣವದನ ಎಂದರೆ ಬೇಸರದ ಭಾವನೆ ತೋರಿಸುತ್ತಿರುವ ಮುಖ ಎಂದರ್ಥ!

ರಾಮಾಯಣದಲ್ಲಿ...

ರಾಮಾಯಣದ ಅಯೋಧ್ಯಾ ಕಾಂಡದ ಸಪ್ತಮ ಸರ್ಗದಲ್ಲಿ 17ನೇ ಶ್ಲೋಕದಲ್ಲಿ ಈ ಪದ ಬಳಕೆ ಆಗಿದೆ.

"ವಿಷಣ್ಣವದನಾಂ ಹಿ ತ್ವಾಂ ಲಕ್ಷಯೇ ಬೃಶದುಃಖಿತಾಂ"

ಇದು ಮಂಥರೆಯ ಮುಖದಲ್ಲಿನ ನೋವನ್ನು ನೋಡಿ ಕೈಕೆಯಿ ಗಮನಿಸಿ ಹೇಳಿದ ನುಡಿ ವಾಲ್ಮೀಕಿಯ ರಚನೆ.

ಮಹಾಭಾರತದಲ್ಲಿ...

ಮಹಾಭಾರತದ ಆದಿಪರ್ವದ ೨೦ನೇ ಅಧ್ಯಾಯದಲ್ಲಿ ಗರುಡನ ಕಥೆಯಲ್ಲಿ ವಿನತೆಯು ತನ್ನ ಪಂದ್ಯದಲ್ಲಿ ಸೋತು ಬೇಸರದ ಮುಖಭಾವನೆಯ ಜೊತೆ ಕದ್ರುವಿನ ದಾಸಿ ಆಗಿದ್ದನ್ನು ಈ ಮುಂದಿನ ಶ್ಲೋಕದ ಮೂಲಕ ಹೇಳಲಾಗಿದೆ.

"ವಿನತಾಂ ವಿಷಣ್ಣವದನಾಂ ಕದ್ರೂರ್ದಾಸ್ಯೆ ನ್ಯಯೋಜಯತ್"

ಭರತಮುನಿಯ ನಾಟ್ಯಶಾಸ್ತ್ರದಲ್ಲಿ...

ಇದಲ್ಲದೇ ಭರತ ಮುನಿಯ ನಾಟ್ಯಶಾಸ್ತ್ರದಲ್ಲಿ ೮ನೇ ಅಧ್ಯಾಯದಲ್ಲಿ ೩೬ ದೃಷ್ಟಿಗಳ ವಿವರಣೆಯಲ್ಲಿ ವಿಷಣ್ಣ ಎಂಬುದು ಒಂದು ರೀತಿಯ ನೋಟ ಆಗಿದೆ. 

ಕಣ್ಣು ತೆರೆದಿದ್ದು ಆದರೆ ರೆಪ್ಪೆ ಪಿಳುಕಿಸದೇ ಕೆಳಕ್ಕಿದ್ದು ಕಣ್ಣು ಗುಡ್ಡೆ ಕೂಡಾ ನಿಶ್ಚಲ ಆಗಿರುವ ನೋಟಕ್ಕೆ ವಿಷಣ್ಣ ಎನ್ನುತ್ತಾರೆ. 

ದುಃಖ, ನಿರುತ್ಸಾಹ, ಖಿನ್ನತೆ, ಬೇಸರ ವ್ಯಕ್ತ ಪಡಿಸುವ ನೋಟ ಇದಾಗಿದೆ.

ಈಗಲೂ ಕೂಡಾ ವಿಷಣ್ಣ ಪದದ ಅರ್ಥ ಅದೇ. ಯಾವುದೇ ಪದಕ್ಕೆ ಗುಣವಾಚಕ ಆಗಿ ಬಂದಾಗ ಅದರಲ್ಲಿ ನಿರುತ್ಸಾಹ, ಬೇಸರ, ಖಿನ್ನತೆ ಇರುವದನ್ನು ಸೂಚಿಸುತ್ತದೆ.

ಉದಾಹರಣೆಗೆ:

ವಿಷಣ್ಣ ವ್ಯಕ್ತಿ ಅಥವಾ ವಿಷಣ್ಣ ಹುಡುಗ ಎಂದರೆ ನಿರುತ್ಸಾಹ, ಖಿನ್ನ ಭಾವನೆ ಸೂಚಿಸುತ್ತಿರುವ ವ್ಯಕ್ತಿ ಅಥವಾ ಹುಡುಗ ಎಂದರ್ಥ.

ವಿಷಣ್ಣ ಮನಸ್ಕ ಅಂದರೆ ನಿರುತ್ಸಾಹದ ಮನಸ್ಥಿತಿಯಲ್ಲಿ ಇರುವವನು. 

ಉದಾ: ಆತ ಎಷ್ಟು ವಿಷಣ್ಣ ಮನಸ್ಕ ಆಗಿದ್ದ ಎಂದರೆ ಹಾಸ್ಯ ನಾಟಕ ನೋಡಿದರೂ ನಗು ಬರಲೇ ಇಲ್ಲ.

ವಿಷಣ್ಣ ವಾತಾವರಣ ಎಂದರೆ ಬೇಸರದ ವಾತಾವರಣ. ಎಲ್ಲರಿಗೂ ನಿರುತ್ಸಾಹ, ದುಃಖ ಉಕ್ಕಿಸುತ್ತಿರುವ ಸ್ಥಿತಿ.

ಉದಾ: ಜನಪ್ರಿಯ ನಟರ ಅಗಲಿಕೆಯಿಂದ ಎಲ್ಲ ಕಡೆ ವಿಷಣ್ಣ ವಾತಾವರಣ ಇತ್ತು. ಯಾರ ಮುಖದಲ್ಲೂ ಖುಷಿಯ ಲವಲೇಶವೂ ಇರಲಿಲ್ಲ.

ವಿಷಣ್ಣ ಭಾವ ಎಂದರೆ ಮುಖದಲ್ಲಿ ನಿರಾಶೆಯ, ಹತಾಶೆಯ ಭಾವ.

ಉದಾ:  ಆ ಯುದ್ಧದಲ್ಲಿ ನಡೆದ ರಕ್ತಪಾತದ ವಿವರ ಓದಿದಂತೆಲ್ಲ ನಮ್ಮ ಮನದೊಳಗೆ ವಿಷಣ್ಣ ಭಾವ ಮೂಡುತ್ತದೆ. ಇವೆಲ್ಲ ಯಾವ ಪುರುಷಾರ್ಥಕ್ಕಾಗಿ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ವಿಷಣ್ಣ ಮನಸ್ಸು, ವಿಷಣ್ಣ ರಾತ್ರಿ, ವಿಷಣ್ಣ ನೆನಪು, ವಿಷಣ್ಣ ಪರಿಸ್ಥಿತಿ, ವಿಷಣ್ಣ ಅವಸ್ಥೆ ಹೀಗೆ ಯಾವುದೇ ಪದದ ಮುಂಚೆ ಈ ಪದ ಬಂದರೆ ಅಲ್ಲಿ ನಿರಾಶೆ ಸೂಚಿಸುತ್ತದೆ.

ಉದಾಹರಣೆಗೆ ವಿಷಣ್ಣ ನಗೆ. ಹತಾಶೆಯಿಂದ ನಾನು ಅವರ ಕಡೆ ನೋಡಿದಾಗ ನನ್ನ ಕಡೆ ವಿಷಣ್ಣ ನಗೆ ಬೀರಿದರು. ಇಲ್ಲಿ ವಿಷಣ್ಣ ನಗೆ ಎಂದರೆ ಬಾಯಲ್ಲಿ ಕೇವಲ ಬಲವಂತವಾಗಿ ಆಡುತ್ತಿರುವ ನಗುವಿದೆ ಆದರೆ ಕಣ್ಣು ನಿರಾಶೆ, ಖಿನ್ನ ಭಾವ ಸೂಚಿಸುತ್ತಿದೆ ಎಂದರ್ಥ.

ಕಾಲಮಾನ

ರಾಮಾಯಣದಲ್ಲೂ ಹಾಗೂ ಮಹಾಭಾರತದಲ್ಲೂ ಈ ಪದ ಬಳಕೆ ಆಗಿದೆ. ಅಂದರೆ ಈ ಪದ ಆ ಗ್ರಂಥಗಳಿಗಿಂತಲೂ ಹಳೆಯದು.

ಒಂದು ಅಂದಾಜಿನ ಪ್ರಕಾರ ರಾಮಾಯಣ  ಸುಮಾರು ನಮ್ಮ ಕ್ಯಾಲೆಂಡರ್ ಇಸವಿಗಿಂತ ಮುಂಚೆ 5000 ವರ್ಷಗಳ ಹಿಂದೆ ನಡೆದಿತ್ತು ಎಂದು ಅಂದಾಜಿದೆ. ಅಂದರೆ ಸುಮಾರು 7022  ವರ್ಷದ ಹಿಂದೆ (2022ರಲ್ಲಿ) ಎಂದು ಹೇಳಬಹುದು. 

ನಾಟ್ಯಶಾಸ್ತ್ರದ ಕಾಲಮಾನ 500 ಬಿಸಿಇ ಅಂದರೆ 2522 ವರ್ಷದ ಹಿಂದೆ (2022ರಲ್ಲಿ) ಎಂದು ಅಂದಾಜಿಸಲಾಗಿದೆ. ಈ ಪದ ನಾಟ್ಯಶಾಸ್ತ್ರದಲ್ಲಿ ಸಹ ಇದೆ.

ಈ ಪದ ಹಲವು ಸಾವಿರ ವರ್ಷಕ್ಕೂ ಹಳೆಯ ಅತ್ಯಂತ ಪುರಾತನ ಪದ!

ಮೂಲ ಭಾಷೆ

ಸಂಸ್ಕೃತ

ಇದೇ ಅರ್ಥದ ಪದಗಳು

ನಿರುತ್ಸಾಹ, ಕಳೆಗುಂದಿದ, ನಿರಾಶಾಭಾವ

ವಿರುದ್ಧ ಅರ್ಥದ ಪದಗಳು

ಉತ್ಸಾಹಿ, ಖುಷಿ

ಇದು ಇರುವ ಬೇರೆ ಪದಗಳು

ವಿಷಣ್ಣಮನ, ವಿಷಣ್ಣಹೃದಯ, ವಿಷಣ್ಣವದನ, ವಿಷಣ್ಣಮುಖ

ಬೇರೆ ಭಾಷೆಗಳಲ್ಲಿ

ಇಂಗ್ಲಿಷ್: ಡಿಜೆಕ್ಟಡ್, ಸ್ಯಾಡ್, ಸ್ಪಿರಿಟ್ ಲೆಸ್
ಹಿಂದಿ: ವಿಷಣ್ಣ್
ಸಂಸ್ಕೃತ: ವಿಷಣ್ಣ

vishaNNa (Kannada) - Meaning in English

Dejected, Sad, Downcast, Spiritless, Hangdog

विषण्ण (कन्नड) - हिंदी में अर्थ

 विषण्ण, खिन्न, दुखी, उदास

विषण्ण (कन्नड) - संस्कृत अर्थ

विषण्ण

ಈ ಲೇಖನ ಹೇಗನಿಸಿತು?ಈ ಪದದ ಬಗ್ಗೆ ಹೆಚ್ಚಿನ ವಿವರ ನಿಮಗೆ ಗೊತ್ತಾ? ಅಥವಾ ಏನಾದ್ರೂ ತಪ್ಪಿದೆಯಾ? ಕಮೆಂಟ್ ಹಾಕ್ತೀರಾ? ಈ ತಾಣ ನಿಮ್ಮ ಗೆಳೆಯರಿಗೆ ಇದು ಇಷ್ಟ ಆಗುತ್ತೆ ಅನ್ನಿಸಿದರೆ ಅವರಿಗೂ ಶೇರ್ ಮಾಡಿ. ಸರಿನಾ? ವಂದನೆಗಳು.

ರಾಜೇಶ ಹೆಗಡೆ

ಲೇಖಕರು ಒಬ್ಬ ನುರಿತ ಕಂಪ್ಯೂಟರ್ ಇಂಜಿನಿಯರ್ ಆಗಿದ್ದು ವಿಸ್ಮಯನಗರಿ.ಕಾಂ, ಪದಮಂಜರಿ.ಕಾಂ, ಗಣಕಪುರಿ.ಕಾಂ ನಿರ್ಮಾತೃ ಕೂಡಾ. ಕನ್ನಡದಲ್ಲಿ ಕಂಪ್ಯೂಟರ್ ಬಗ್ಗೆ ತಿಳಿಸ ಬೇಕು ಅನ್ನುವದು ಅವರ ಮಹದಿಚ್ಚೆ. ಕನ್ನಡ ಬ್ಲಾಗ್ಗಿಂಗ್, ಕಂಪ್ಯೂಟರ್ ತಂತ್ರಜ್ಞಾನ, ಫೋಟೋಗ್ರಾಫಿ, ವಿಡಿಯೋ ಗ್ರಾಫಿ, ಪ್ರವಾಸ ಮುಖ್ಯ ಹವ್ಯಾಸ. ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆಯನ್ನು ತಕ್ಕ ಮಟ್ಟಿಗೆ ಬಲ್ಲರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು