ಸನಿಹ

ಭೂಮಿಯ ಸನಿಹಕ್ಕೆ ಒಂದು ಧೂಮಕೇತು ಹಾದು ಹೋಯಿತು.

ಸನಿಹ ಪದದ ಅರ್ಥ, ಉತ್ಪತ್ತಿ, ಉದಾಹರಣೆಯನ್ನು ವಿವರವಾಗಿ ಈ ಪುಟದಲ್ಲಿ ನೋಡೋಣ.

{tocify} $title={ವಿಷಯ ಸೂಚಿ}

ಅರ್ಥ: ಹತ್ತಿರ, ಸಮೀಪ, ಬಳಿ, ಸನಿಯ, ಹತ್ರ, ನಿಕಟ, ಆತ್ಮೀಯ, ಆಪ್ತ

English: Saniha (Kannada) - Near, Dear

हिंदी : सनिह (कन्नड) - निकट, प्रिय

संस्कृत : सनिह (कन्नड) - समीप, प्रिय

ಅರ್ಥ

ಗುಣವಾಚಕ(೧):

ಹತ್ತಿರ, ಸಮೀಪ, ಬಳಿ, ಸನಿಯ, ಹತ್ರ, ನಿಕಟ

ಗುಣವಾಚಕ(೨):

ಆತ್ಮೀಯ, ಆಪ್ತ

ಉತ್ಪತ್ತಿ

ಸಮೀಪ ಎಂದರೆ ಸಂಸ್ಕೃತದಲ್ಲಿ ಹತ್ತಿರ ಎಂದರ್ಥ. ಅದು ತುಂಬಾ ಹಳೆಯ ಪದ. ಬಹುಶಃ ಸನಿಯ / ಸನಿಹ ಪದ ಅದರ ತದ್ಭವ ಆಗಿರುವ ಸಾಧ್ಯತೆ ಇದೆ. 

ಹಳಗನ್ನಡದಲ್ಲಿ ಸನಿಯ ಎಂದರೆ ಹತ್ತಿರ ಹಾಗೂ ಸನ್ನಿಹಿತ ಅಂದರೂ ಸಮೀಪದಲ್ಲಿನ ಎಂಬರ್ಥ ಇದೆ. 

ಕೆಲವು ಕಡೆ ಸನಿಪ ಎಂಬ ಬಳಕೆಯನ್ನು ನೋಡಿದ್ದೇನೆ. ಸನಿಪ ಇದು ಸಮೀಪ ಪದದ ಅಪಭ್ರಂಶ ಪದ ಎನ್ನಬಹುದು.

ಒಂದು ರೀತಿಯಲ್ಲಿ ಸಮೀಪ -> ಸನಿಪ -> ಸನಿಹ ಆಗಿರುವ ಸಾಧ್ಯತೆ ಕೂಡಾ ಇದೆ. ಯಾಕೆಂದರೆ ಕನ್ನಡದಲ್ಲಿ ಹಲವು ಕಡೆ 'ಪ' ಕಾರ ದಿಂದ 'ಹ' ಕಾರ ಬದಲಾಗಿರುವ ಪದಗಳಿವೆ.
ಉದಾ:
ಪತ್ತು -> ಹತ್ತು
ಪೋಗು -> ಹೋಗು
ಪೇಳ್ -> ಹೇಳ್

ಉಪಯೋಗ

ಗುಣವಾಚಕ ೧ (ಹತ್ತಿರ, ಸಮೀಪ)
  1. ಭೂಮಿಯ ಸನಿಹಕ್ಕೆ ಒಂದು ಧೂಮಕೇತು ಹಾದು ಹೋಯಿತು. (ಮೇಲಿನ ಪದ ಚಿತ್ರ ಗಮನಿಸಿ)
  2. ಆ ಮನೆಯ ಸನಿಹದಲ್ಲೇ ಒಂದು ಕೆರೆ ಇತ್ತು. / ಆ ಮನೆಯ ಸನಿಹ ಒಂದು ಕೆರೆ ಇತ್ತು.
  3. ನನ್ನ ಸನಿಹಕ್ಕೆ ಬಂದು ಆಕೆ ನನ್ನ ಕಿವಿಯಲ್ಲಿ ಒಂದು ಗುಟ್ಟನ್ನು ಹೇಳಿದಳು. / ನನ್ನ ಸನಿಹ ಬಂದು ಆಕೆ ನನ್ನ ಕಿವಿಯಲ್ಲಿ ಒಂದು ಗುಟ್ಟನ್ನು ಹೇಳಿದಳು.
  4. ನಮ್ಮ ಆಫೀಸಿನ ಸನಿಹ ಒಂದು ಬಸ್ ನಿಲ್ದಾಣ ಇದೆ.
  5. ಮಾಡಿದ ಸಣ್ಣ ತಪ್ಪಿಗೆ ಗೆಲುವಿನ ಸನಿಹದಲ್ಲಿದ್ದ ಆ ಟೀಂ ಸೋತು ಬಿಟ್ಟುತು.
  6. ಅವನು ಆಕೆಯ ತುಂಬಾ ಸನಿಹಕ್ಕೆ ಹೋದಾಗ ಆಕೆಗೆ ಸ್ವಲ್ಪ ಮಜುಗರ ಆಯ್ತು.
ಗುಣವಾಚಕ ೨ (ಆತ್ಮೀಯ, ಆಪ್ತ)
  • ಮುರಳಿಯು ರಾಧೆಗೆ ತುಂಬಾ ಸನಿಹ .
  • ದೊಡ್ಡೇಗೌಡ ಕುಟುಂಬ ನಮಗೆ ತುಂಬಾ ಸನಿಹ.
  • ಅಷ್ಟೊಂದು ಸನಿಹ ಆಗಿದ್ದ ಅವರು ಕ್ಷುಲ್ಲಕ ಕಾರಣಕ್ಕೆ ಬೇರೆ ಆದರು.

ವಿವರ

ಸನಿಹ ಎಂದರೆ ಕಡಿಮೆ ದೂರದಲ್ಲಿ ಅಥವಾ ಹತ್ತಿರದಲ್ಲಿ ಎಂಬ ಮುಖ್ಯ ಅರ್ಥವಿದೆ. ಇದು ನಿಜವಾದ ಭೌತಿಕ ಎರಡು ವಸ್ತುಗಳ ನಡುವಿನ ದೂರ ಇರಬಹುದು ಅಥವಾ ಸಾಂಕೇತಿಕ ದೂರ ಕೂಡಾ ಇರಬಹುದು.

ಉದಾಹರಣೆಗೆ (ಮೇಲೆ  ಉದಾ ೪) ಗೆಲುವಿನ ಸನಿಹದಲ್ಲಿರುವ ಎಂದಾಗ ಗೆಲ್ಲುವ ಸಾಧ್ಯತೆ ಜಾಸ್ತಿ ಇದೆ ಎಂದರ್ಥ. ಇಲ್ಲಿ ಗೆಲುವು ಯಾವುದೇ ವಸ್ತು ಅಲ್ಲ. ಕೇವಲ ಗುರಿ ಮಾತ್ರ. 

ಇನ್ನೊಂದು ಉದಾಹರಣೆ "ಆ ಎರಡು ಮನಸ್ಸುಗಳು ತುಂಬಾ ಸನಿಹ ಆಗಿದ್ದವು" ಇಲ್ಲಿ ಮನಸ್ಸುಗಳ ನಡುವಿನ ದೂರ ಸಾಂಕೇತಿಕ ಮಾತ್ರ. ತೀರಾ ಆಪ್ತರು ಅಥವಾ ಆತ್ಮೀಯರು ಎಂಬ ಅರ್ಥ ಕೊಡುತ್ತದೆ.

ಟ್ರೆಕ್ಕಿಂಗ್ ಗೆ ಹೋದಾಗ ಆ ದಟ್ಟ ಅರಣ್ಯದಲ್ಲಿ ದಾರಿ ತಪ್ಪಿತು. ಅಲೆದಾಡಿ ಒಂದು ಕಡೆ ರಾತ್ರಿ ಎಲೆಗಳ ರಾಶಿಯ ಮೇಲೆ ಮರದ ಕೆಳಗೆ ಸುಖದಿಂದ ಮಲಗಿದ್ದೆವು. ಬೆಳಿಗ್ಗೆ ಎದ್ದಾಗ ಸಿಂಹದ ಗುಹೆಯೊಂದು ಸನಿಹದಲ್ಲೇ ಇರುವದು ಗೊತ್ತಾಯ್ತು. ಇಲ್ಲಿ ಸಿಂಹದ ಗುಹೆ ಹತ್ತಿರ ಇತ್ತು ಎಂಬರ್ಥದಲ್ಲಿ ಸನಿಹ ಪದ ಬಳಕೆ ಆಗಿದೆ.

ಕೆಲವರು ಸನಿಹದ ಬದಲಾಗಿ ಸನಿಯ ಎಂದು ಬಳಸುತ್ತಾರೆ. ಅದರ ಅರ್ಥವೂ ಕೂಡಾ ಸನಿಹ ಪದಕ್ಕೆ ಸಮ.

ಕಾಲಮಾನ

1894ರ ರೆವೆರೆಂಡ್ ಫೆರ್ಡಿನೆಂಡ್ ಕಿಟ್ಟೆಲ್ ಅವರ ನಿಘಂಟಿನಲ್ಲಿ ಈ ಪದದ ಉಲ್ಲೇಖವಿದೆ. ಅಂದರೆ ಈ ಕಾಲಕ್ಕಿಂತ ಮೊದಲೇ ಈ ಪದ ಬಳಕೆಯಲ್ಲಿದೆ ಅನ್ನಬಹುದು.
1145ರ ನಾಗವರ್ಮ ಕೃತಮಪ್ಪನವರ ಅಭಿದಾನ ವಸ್ತು ಕೋಶಂ ಅಲ್ಲಿ ಈ ಪದ ನನಗೆ ಸಿಗಲಿಲ್ಲ. 

ಆದರೆ ಈ ಪದ ಹಳಗನ್ನಡದಲ್ಲೂ ಸನಿಯ ಎಂಬ ರೂಪದಲ್ಲಿ ಬಳಕೆಯಲ್ಲಿತ್ತು.

ಮೂಲ ಭಾಷೆ

ಕನ್ನಡ

ಇದೇ ಅರ್ಥದ ಪದಗಳು

  1. ಸನಿಯ, ಹತ್ತಿರ, ಸಮೀಪ, ಬಳಿ, ನಿಕಟ, ಹತ್ರ
  2. ಆತ್ಮೀಯ, ಆಪ್ತ

ವಿರುದ್ಧ ಅರ್ಥದ ಪದಗಳು

  1. ದೂರ, ತುಂಬಾ ಅಂತರ, ಬಹಳ ಅಂತರ
  2. ಆತ್ಮೀಯನಲ್ಲದ, ಆಪ್ತನಲ್ಲದ

ಇದು ಇರುವ ಬೇರೆ ಪದಗಳು

ತುಂಬಾ ಸನಿಹ = ತುಂಬಾ ಆತ್ಮೀಯ

ಆಧಾರಿತ ಪದಗಳು

ಸನಿಯ

ಬೇರೆ ಭಾಷೆಗಳಲ್ಲಿ

ಇಂಗ್ಲಿಷ್: ನಿಯರ್, ಡಿಯರ್
ಹಿಂದಿ: ನಿಕಟ್
ಸಂಸ್ಕೃತ: ಸಮೀಪ, ಪ್ರಿಯ

Saniha (Kannada) Meaning in English

Near, Dear

सनिह (कन्नड) - हिंदी में अर्थ

निकट, प्रिय

सनिह (कन्नड) - संस्कृत अर्थ

समीप, प्रिय
ರಾಜೇಶ ಹೆಗಡೆ

ಲೇಖಕರು ಒಬ್ಬ ನುರಿತ ಕಂಪ್ಯೂಟರ್ ಇಂಜಿನಿಯರ್ ಆಗಿದ್ದು ವಿಸ್ಮಯನಗರಿ.ಕಾಂ, ಪದಮಂಜರಿ.ಕಾಂ, ಗಣಕಪುರಿ.ಕಾಂ ನಿರ್ಮಾತೃ ಕೂಡಾ. ಕನ್ನಡದಲ್ಲಿ ಕಂಪ್ಯೂಟರ್ ಬಗ್ಗೆ ತಿಳಿಸ ಬೇಕು ಅನ್ನುವದು ಅವರ ಮಹದಿಚ್ಚೆ. ಕನ್ನಡ ಬ್ಲಾಗ್ಗಿಂಗ್, ಕಂಪ್ಯೂಟರ್ ತಂತ್ರಜ್ಞಾನ, ಫೋಟೋಗ್ರಾಫಿ, ವಿಡಿಯೋ ಗ್ರಾಫಿ, ಪ್ರವಾಸ ಮುಖ್ಯ ಹವ್ಯಾಸ. ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆಯನ್ನು ತಕ್ಕ ಮಟ್ಟಿಗೆ ಬಲ್ಲರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು